ಫೀಲ್ಡಿಂಗ್, ಹೆನ್ರಿ
	1707-1754, ಇಂಗ್ಲಿಷ್ ಕಾದಂಬರಿಕಾರ. ನಾಟಕಕಾರ. ಹುಟ್ಟಿದ್ದು ಗ್ಲ್ಯಾಸ್ಟನ್‍ಬರಿಯ ಹತ್ತಿರದ ಷಾರ್ಪ್‍ಹ್ಯಾಮ್ ಪಾರ್ಕಿನಲ್ಲಿ. ತಂದೆ ಜನರಲ್ ಎಡ್ಮಂಡ್ ಫೀಲ್ಡಿಂಗ್. ತಾಯಿ ಸರ್ ಹೆನ್ರಿ ಗೌಲ್ಡನ ಮಗಳು. ಬಾಲ್ಯವನ್ನು ಡಾರ್ಸೆಟ್‍ನಲ್ಲಿ ಕಳೆದು ವಿದ್ಯಾಭ್ಯಾಸಕ್ಕಾಗಿ ಈಟನ್ನಿಗೆ ಹೋದ. ರಾಜಕಾರಣಿಗಳಾದ ವಿಲಿಯಮ್ ಪಿಟ್ ಮತ್ತು ಚಾಲ್ರ್ಸ್ ಜೇಮ್ಸ್ ಇವರ ಸಂಪರ್ಕ ಲಭಿಸಿತು. ನ್ಯಾಯಶಾಸ್ತ್ರ ಕಲಿಯಲು ಲೇಡನ್ನಿಗೆ ಹೋದ. ತಂದೆ ಎರಡನೆಯ ಮದುವೆ ಮಾಡಿಕೊಂಡು ರಿಕ್ತ ಹಸ್ತನಾದ್ದರಿಂದ ಬರುತ್ತಿದ್ದ ಹಣಸಹಾಯ ನಿಂತಿತಾಗಿ ಲಂಡನ್ನಿಗೆ ಹಿಂದಿರುಗಿ ಬರೆವಣಿಗೆಗಾರಂಭಿಸಿ ಲವ್ ಇನ್ ಸೆವರಲ್ ಮಾಸ್‍ಕ್ಸ್ (1728), ದಿ ಟೆಂಪಲ್ ಬೋ (1730), ಟ್ರ್ಯಾಜಡಿ ಆಫ್ ಟ್ರ್ಯಾಜಡೀಸ್ ಆರ್ ಟಾಮ್‍ತಂಬ್-ಮುಂತಾದ ಲಘು ನಾಟಕಗಳನ್ನು ಬರೆದ. 1735ರಲ್ಲಿ ಷಾರ್ಲೆಟ್ ಕ್ರ್ಯಾಡಾಕ್ ಎಂಬಾಕೆಯನ್ನು ಮದುವೆಯಾಗಿ ತಾಯಿ ಆಸ್ತಿಯಾಗಿ ಉಳಿದಿದ್ದ ಒಂದು ಚಿಕ್ಕ ಮನೆಯಲ್ಲಿ ನೆಲೆ ನಿಂತ. ಈತನ ಇಬ್ಬರು ಕಥನಾಯಕಿಯರಾದ ಸೋಫಿಯ ಮತ್ತು ಅಮೀಲಿಯ ಎಂಬವರಲ್ಲಿ ಕ್ರ್ಯಾಡಾಕಳ ವ್ಯಕ್ತಿತ್ವವನ್ನು ಕಾಣಬಹುದು. ಹೆಂಡತಿ ಮದುವೆಯ ಸಮಯದಲ್ಲಿ ತಂದ 1,500 ಪೌಂಡು ಹಣ ತೀರಿ ಹೋಗಲು ಲಂಡನ್ನಿಗೆ ಹಿಂದಿರುಗಿ ಒಂದು ಚಿಕ್ಕ ನಾಟಕ ಕಂಪನಿಯನ್ನು ಸೇರಿಸಿ ಪ್ಯಾಸ್ಕ್ವಿನ್, ದಿ ಹಿಸ್ಟಾರಿಕಲ್ ರಿಜಿಸ್ಟರ್ ಫಾರ್ (1736) ಮುಂತಾದ ವ್ಯಂಗ್ಯ ನಾಟಕಗಳನ್ನು ರಂಗಮಂಚದ ಮೇಲೆ ತಂದ. ನಾಟಕ ಕಂಪನಿಯನ್ನು ಮುಚ್ಚಬೇಕಾದ ಸಂದರ್ಭ ಬಂದಾಗ ನ್ಯಾಯಶಾಸ್ತ್ರವನ್ನೋದಿ ವಕೀಲನಾದ (1740).

	ಕಾದಂಬರಿಯ ನವಯುಗ ಪ್ರವರ್ತಕನಾದ ಸ್ಯಾಮ್ಯುಯೆಲ್ ರಿಚರ್ಡ್‍ಸನ್ನನ ಪಮೇಲಾ ಕಾದಂಬರಿಯಿಂದ ಸ್ಫೂರ್ತಿಗೊಂಡು ಜೋಸೆಫ್ ಆ್ಯಂಡ್ರೂಸ್ ಎಂಬ ತನ್ನ ಮೊದಲ ವ್ಯಂಗ್ಯ ಕಾದಂಬರಿಯನ್ನು ಬರೆದ. ಈ ವೇಳೆಗೆ ಹೆಂಡತಿ ಸತ್ತು ಹೋದಳು. ಎ ಜರ್ನಿ ಫ್ರಂ ದಿಸ್ ವಲ್ರ್ಡ್ ಟು ದಿ ನೆಕ್ಟ್ಸ್ ಮತ್ತು ದಿ ಹಿಸ್ಟರಿ ಆಫ್ ಜೊನಾಥನ್ ವೈಲ್ಡ್ ದಿ ಗ್ರೇಟ್ ಮುಂತಾದ ಬರಹಗಳ ಜೊತೆಗೆ ಇತರ ಪ್ರಬಂಧಗಳನ್ನೂ ಕವಿತೆಗಳನ್ನೂ ಒಳಗೊಂಡ ಈತನ ಮಿಸಲೆನೀಸ್ 1743ರಲ್ಲಿ ಪ್ರಕಟವಾಯಿತು. ದಿ ಟ್ರೂ ಪೇಟ್ರಿಯಟ್ ಮತ್ತು ದಿ ಜಾಕೊಬೈಟ್ ಜರ್ನಲ್ ಎಂಬ ಸರ್ಕಾರದ ಪರವಾದ ಪತ್ರಿಕೆಗಳ ಸಂಪಾದಕನಾದುದರಿಂದ ಮಿಡಲ್‍ಸೆಕ್ಸ್ ಮತ್ತು ವೆಸ್ಟ್‍ಮಿನ್‍ಸ್ಟರ್‍ಗಳ ಜಸ್ಟಿಸ್ ಆಫ್ ದಿ ಪೀಸ್ ಆಗಿ ನೇಮಕಗೊಂಡು ಮಾಸಾಶನ ಪಡೆದ. ಸಂಪ್ರದಾಯವನ್ನು ಮೀರಿ ತನ್ನ ಹೆಂಡತಿಯ ಸೇವಕಿ ಮೇರಿ ಡ್ಯಾನಿಯಲಳನ್ನು ಮದುವೆಯಾದ (1746). 1749ರಲ್ಲಿ ಪ್ರಕಟವಾದ ದಿ ಹಿಸ್ಟರಿ ಆಫ್ ಟಾಮ್ ಜೋನ್ಸ್, ಎ ಫೌಂಡ್ಲಿಂಗ್-ಎಂಬ ಮಹಾ ಕಾದಂಬರಿಯಿಂದ ಈತನ ಕೀರ್ತಿ ಚಿರಸ್ಥಾಯಿಯಾಯಿತು. ಹಾಸ್ಯಭರಿತ ಗದ್ಯ ಮಹಾಕಾವ್ಯ ಎಂದು ಫೀಲ್ಡಿಂಗನೇ ಅದನ್ನು ಬಣ್ಣಿಸಿದ್ದಾನೆ. ನಾಟಕರಂಗದಲ್ಲಿ ಕಾಣಬರುತ್ತಿದ್ದ ಮಾನವ ಜೀವನವನ್ನು ಕಾದಂಬರಿಯ ವಿಸ್ತಾರರಂಗದಲ್ಲಿ, ಇಂಗ್ಲಿಷಿನಲ್ಲಿ ಮೊದಲ ಬಾರಿಗೆ ಈತ ಚಿತ್ರಿಸಿದ. ನಯವಿಲ್ಲವೆಂದು ಕೆಲವರು ಆಕ್ಷೇಪಿಸಿದರೂ ಪಾತ್ರ ಚಿತ್ರಣದ್ಭುತವಾದುದೆಂದೂ ಮಾನವ ಸ್ವಭಾವದ ಗಾಢವಾದ ಅರಿವು ಕಾಣುವುದೆಂದೂ ಇದನ್ನು ಕುರಿತು ಅನೇಕರು ಹೇಳಿದ್ದಾರೆ. ಈತನ ಕೊನೆಯ ಕಾದಂಬರಿ ಅಮೀಲಿಯದಲ್ಲಿ (1751) ಈ ಹಿಡಿತವಿಲ್ಲ. ಆದರೂ ಕವಿಯ ಜೀವನದ ಕೆಲಭಾಗ ಇಲ್ಲಿ ಬಂದಿದೆಯಾಗಿ ಇದೂ ಪ್ರಸಿದ್ಧವೆನಿಸಿದೆ. ಕಾಯಿಲೆಯ ಚಿಕಿತ್ಸೆಗಾಗಿ 1753ರಲ್ಲಿ ಲಿಸ್‍ಬನ್ನಿಗೆ ಹೋಗಿ ಅಲ್ಲಿಯೇ ಈತ ಗತಿಸಿದ. ಈತನ ಕಡೆಯ ಕೃತಿ ಜರ್ನಲ್ ಆಫ್ ಎ ವಾಯೆಜ್ ಟು ಲಿಸ್ಬನ್ ಈತ ಸತ್ತ ಒಂದು ವರ್ಷದ ಮೇಲೆ ಪ್ರಕಟವಾಯಿತು.								(ಎಚ್.ವಿ.ಎಸ್.)

	ಎಚರ್ಡ್‍ಸನ್‍ನ ಪಮೇಲ ಜನಪ್ರಿಯವಾಯಿತು. ಈ ಕಾದಂಬರಿಯ ನಾಯಕಿ ಪಮೇಲಾಳು ಸಂಪೂರ್ಣವಾಗಿ ವಿಶ್ವಾಸಾರ್ಹಳೆಂದೇ ಕಾದಂಬರಿಕಾರ ಚಿತ್ರಿಸುತ್ತಾನೆ. ಫೀಲ್ಡಿಂಗನ ತುಂಟ ಬುದ್ಧಿಗೆ, ಪಮೇಲಳ ವರ್ತನೆಗೆ ಬೇರೊಂದು ವ್ಯಾಖ್ಯಾನ ಸಾಧ್ಯ ಎನಿಸಿತು. `ಜೋಸೆಫ್ ಆ್ಯಂಡ್ರೂಸ್ ಕಾದಂಬರಿಯಲ್ಲಿ ಪಮೇಲ ಕದೀಮ ಹೆಣ್ಣು ಫೀಲ್ಡಿಂಗ್ ರಿಚಡ್‍ಸನ್ನನ ನೈತಿಕ ಜಗತ್ತನ್ನು ಹಾಸ್ಯ ಮಾಡುತ್ತಾನೆ. ಹೊರ ತೋರಿಕೆ, ಯಥಾರ್ಥ ಇವುಗಳ ನಡುವಣ ವ್ಯತ್ಯಾಸವೇ ಫೀಲ್ಡಿಂಗನ ಕಾದಂಬರಿಗಳ ವಸ್ತು `ಜೋಸೆಫ್ ಆ್ಯಂಡ್ರೂಸ್ ಕಾದಂಬರಿಯಲ್ಲಿ ಸಮಾಜವು, ಗಂಡಿಗೂ ಹೆಣ್ಣಿಗೂ ಅನ್ವಯಿಸುವ ನೈತಿಕ ಮಾನದಂಡಗಳಲ್ಲಿ ಪುರುಷನ ಪರವಾದ ಪಕ್ಷಪಾತವನ್ನು ತೋರಿಸುತ್ತಾನೆ. ಕಾದಂಬರಿಯು ಅಂದಿನ ಸಮಾಜವನ್ನು ವಿಮರ್ಶಾತ್ಮಕವಾಗಿ ಪುನರ್ ಸೃಷ್ಟಿ ಮಾಡುತ್ತದೆ. `ಹಾಸ್ಯ ಭರಿತ ಗದ್ಯ ಮಹಾಕಾವ್ಯ ಎನ್ನುವ ವರ್ಣನೆಯು `ಟಾಮ್ ಜೋನ್ಸ್ ಕಾದಂಬರಿಗೂ ಅನ್ವಯಿಸುತ್ತದೆ. ವಾಸ್ತವ ದೃಷ್ಟಿಯಿಂದ ವಿವರಗಳ ಸಮಾರಾಧನೆಯನ್ನು ನೀಡುತ್ತಲೇ, ಸುತ್ತಲಿನ ಬದುಕನ್ನು ಪುನರ್ ಸೃಷ್ಟಿ ಮಾಡುತ್ತಲೇ ಒಂದು ವಿನ್ಯಾಸವನ್ನು ರೂಪಿಸುವ ಕಲೆಯನ್ನು ಬೃಹತ್ ಕಾದಂಬರಿಯಲ್ಲಿ ಪ್ರಥಮತಃ ಮೂಡಿಸಿದ ಸಾಧನೆ ಫೀಲ್ಡಿಂಗ್‍ನದು ತನ್ನ ಕಾಲದ ಸಮಾಜವನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾನೆ. ಆದರೆ ಈ ವಿಡಂಬನೆ ಹರಿತವಾದುದಲ್ಲ, ಇದರಲ್ಲಿ ಖುಷಿ ಇದೆ ಮಹಾಕಾವ್ಯದಂತೆ ಈ ಕಾದಂಬರಿ ಒಂದು ಇಡೀ ಸಮಾಜವನ್ನು ನಮ್ಮ ಮುಂದೆ ನಿಲ್ಲಿಸುತ್ತದೆ, ಆದರೆ ಇದರ ಕೇಂದ್ರದಲ್ಲಿರುವುದು ವಿನೋದ ದೃಷ್ಟಿ. ಇವನ ಕಾದಂಬರಿಗಳೂ ಪರಿಪೂರ್ಣವಲ್ಲ. ತಾನೇ ಕಾದಂಬರಿಯಲ್ಲಿ ಪ್ರವೇಶಿಸುತ್ತಾನೆ. ಒಮ್ಮೊಮ್ಮೆ ನೈತಿಕ ದೃಷ್ಟಿಯು ಮೇಲುಗೈ ಆಗುತ್ತದೆ. ಒಮ್ಮೊಮ್ಮೆ ಹಾಸ್ಯ ಒರಟಾಗುತ್ತದೆ. ಇಷ್ಟಾದರೂ ಇವನು ಸೃಷ್ಟಿಸುವ ಜಗತ್ತು ವೈವಿಧ್ಯಮಯ, ಲವಲವಿಕೆಯಿಂದ ಕೂಡಿದೆ.
(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ